SUKHESH CHANDRESHEKAR CASE: ಸುಕೇಶ್‌ಗೆ ಸಾರಾ ಅಲಿ ಖಾನ್, ಜಾನ್ವಿ ಕಪೂರ್, ಭೂಮಿ ಪೆಡ್ನೇಕರ್ ನಂಟು..?

ನವದೆಹಲಿ: ಹಿರಿಯ ಜನಪ್ರತಿನಿಧಿಗಳ ಆಪ್ತ ಎಂದು ಹೇಳಿಕೊಂಡು ಹಲವು ಮಂದಿಗೆ ನೂರಾರು ಕೋಟಿ ರೂಪಾಯಿ ವಂಚನೆ ಮಾಡಿದ ಆರೋಪದಲ್ಲಿ ಜೈಲು ಸೇರಿರುವ ಬೆಂಗಳೂರು ಮೂಲದ ಸುಕೇಶ್‌ ಚಂದ್ರಶೇಖರ್‌ ಹಲವಾರು ನಟಿಯರಿಗೆ ಉಡುಗೊರೆಗಳನ್ನು ನೀಡುತ್ತಿದ್ದ ಬಗ್ಗೆ ವರದಿಯಾಗಿದೆ. ಬಾಲಿವುಡ್‌ ನಟಿಯರಾದ ಸಾರಾ ಅಲಿಖಾನ್‌, ಜಾನ್ವಿ ಕಪೂರ್‌ ಹಾಗೂ ಭೂಮಿ ಪೆಡ್ನೇಕರ್‌ಗೆ ಸುಕೇಶ್‌ ಚಂದ್ರಶೇಖರ್‌ ಸುಲಿಗೆ ಹಣವನ್ನು ಬಳಸಿಕೊಂಡು ದುಬಾರಿ ಉಡುಗೊರೆಗಳನ್ನು ನೀಡಿದ್ದ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.

ಸಾರಾ ಅಲಿಖಾನ್‌ ಸಂಪರ್ಕಿಸಿದ್ದ ಸುಕೇಶ್‌ ಚಂದ್ರಶೇಖರ್‌

ಸುಕೇಶ್‌ ಚಂದ್ರಶೇಖರ್‌ 2021ರ ಮೇ ತಿಂಗಳಲ್ಲಿ ಸಾರಾ ಅಲಿ ಖಾನ್‌ ಅವರನ್ನು ವಾಟ್ಸಾಪ್‌ ಮೂಲಕ ಸಂಪರ್ಕಿಸಿದ್ದರು. ತಾನು ಸೂರಜ್‌ ರೆಡ್ಡಿ ಎಂದು ಹೇಳಿಕೊಂಡು ಸಾರಾ ಅಲಿಖಾನ್‌ಗೆ ವಾಟ್ಸಾಪ್‌ ಸಂದೇಶ ಕಳುಹಿಸಿದ್ದ ಸುಕೇಶ್‌, ಸ್ನೇಹಪರವಾಗಿ ಒಂದು ದುಬಾರಿ ಕಾರನ್ನು ಗಿಫ್ಟಾಗಿ ಕೊಡುತ್ತೇನೆಂದು ಹೇಳಿದ್ದನಂತೆ. ಅನಂತರ ಸುಕೇಶ್‌ ಆಪ್ತರಲ್ಲಿ ಒಬ್ಬರಾದ ಶ್ರೀಮತಿ ಇರಾನಿ ಕೂಡಾ ಸಾರಾ ಅಲಿ ಖಾನ್‌ ಅವರನ್ನು ಸಂಪರ್ಕಿಸಿದ್ದರು ಎಂದು ಹೇಳಲಾಗಿದೆ. ಇದೇ ಶ್ರೀಮತಿ ಇರಾನಿ ಅವರು ನಟಿ ಜಾಕ್ವೆಲಿನಾ ಫರ್ನಾಂಡಿಸ್‌ ಅವರನ್ನು ಕೂಡಾ ಸುಕೇಶ್‌ ಪರಿಯಿಸಿದ್ದರು.

ಈ ಸಂಬಂಧ ಇಡಿ ಅಧಿಕಾರಿಗಳು ಸಾರಾ ಅಲಿಖಾನ್‌ ಅವರನ್ನು ಈ ಬಗ್ಗೆ ಪ್ರಶ್ನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಾರಾ ಅಲಿಖಾನ್‌ ಅವರು 2022ರ ಜನವರಿ 14 ರಂದು ಇಡಿ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಸುಕೇಶ್‌ ಚಂದ್ರಶೇಖರ್‌ ತಾನು ಸೂರಜ್‌ ರೆಡ್ಡಿ ಎಂಬ ಹೆಸರಿನಲ್ಲಿ ನನ್ನನ್ನು ಪರಿಚಯಿಸಿಕೊಂಡಿದ್ದು ನಿಜ. ನನಗೆ ದುಬಾರಿ ಕಾರು ಆಫರ್‌ ನೀಡಿದ್ದು ಕೂಡಾ ನಿಜ. ಆದರೆ ನಾನು ಯಾವುದನ್ನೂ ಪಡೆಯದೇ ನಿರಾಕರಿಸಿದ್ದೆ. ಹೀಗಾಗಿ ಕೊನೆಗೆ ಆತ ಒಂದು ಚಾಕೊಲೇಟ್‌ ಬಾಕ್ಸ್‌ ಕಳುಹಿಸುವುದಾಗಿ ಹೇಳಿದ್ದ. ಅದಕ್ಕೆ ನಾನು ಒಪ್ಪಿಕೊಂಡಿದ್ದೆ. ಆತ ಚಾಕೊಲೇಟ್‌ ಬಾಕ್ಸ್‌ ಜೊತೆಗೆ ಫ್ರಾಂಕ್‌ ಮುಲ್ಲರ್‌ ವಾಚ್‌ ಒಂದನ್ನು ಕಳುಹಿಸಿದ್ದ ಎಂದು ಪತ್ರದಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.

ಪತ್ನಿ ಮೂಲಕ ಜಾಹ್ನವಿ ಕಪೂರ್ ಸಂಪರ್ಕ

ಇನ್ನು ಬಾಲಿವುಡ್‌ ನಟಿ ಜಾಹ್ನವಿ ಕಪೂರ್ ಅವರನ್ನು ಕೂಡಾ ಸುಕೇಶ್‌ ತನ್ನ ಪತ್ನಿ ಲೀನಾ ಮರಿಯಾ ಪಾಲ್ ಮೂಲಕ ಸಂಪರ್ಕಿಸಿದ್ದ ಎಂದು ಗೊತ್ತಾಗಿದೆ. ಜಾಹ್ನವಿ ಕಪೂರ್‌ ಅವರಿಗೆ  18 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳನ್ನು ಉಡುಗೊರೆಯಾಗಿ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

ಸುಕೇಶ್‌ ಪತ್ನಿ ಲೀನಾ ಮರಿಯಾ ಪಾಲ್ ಅವರು ನೇಲ್ ಆರ್ಟಿಸ್ಟ್ರಿ ಎಂಬ ಸಲೂನ್‌ನ ಮಾಲೀಕರೆಂದು ಹೇಳಿಕೊಂಡು ಜಾಹ್ನವಿ ಕಪೂರ್‌ ಅವರನ್ನು ಸಂಪರ್ಕಿಸಿದ್ದರು. ಜುಲೈ 19, 2021 ರಂದು ಬೆಂಗಳೂರಿನಲ್ಲಿರುವ ತಮ್ಮ ಸಲೂನ್ ಉದ್ಘಾಟನೆಗೆ ಆಹ್ವಾನ ನೀಡಿದ್ದರು.  ಸುಕೇಶ್ ಮತ್ತು ಲೀನಾ ಅವರ ಹಿನ್ನೆಲೆಯನ್ನು ತಿಳಿಯದ ಜಾಹ್ನವಿ ಕಪೂರ್‌, ಬೆಂಗಳೂರಿನಲ್ಲಿ ಸಲೂನ್ ಉದ್ಘಾಟಿಸಿದ್ದರು. ಇದಕ್ಕೆ ಪ್ರತಿಯಾಗಿ, 18.94 ರೂಪಾಯಿ ಜಾಹ್ನವಿ ಕಪೂರ್‌ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಲಾಗಿತ್ತು.

ಇದರ ಜೊತೆಗೆ ಲೀನಾ ಅವರ ತಾಯಿ ತನಗೆ ಕ್ರಿಶ್ಚಿಯನ್ ಡಿಯರ್ ಟೋಟ್ ಬ್ಯಾಗ್ ಅನ್ನು ಉಡುಗೊರೆಯಾಗಿ ನೀಡಿದ್ದರು  ಎಂದು ಇಡಿ ಅಧಿಕಾರಿಗಳಿಗೆ ಜಾಹ್ನವಿ ಕಪೂರ್‌ ತಿಳಿಸಿದ್ದಾರೆ ಎನ್ನಲಾಗಿದೆ.

ಸೂರಜ್‌ ಹೆಸರಲ್ಲಿ ನಟಿ ಭೂಮಿ ಪಡ್ನೇಕರ್‌ ಸಂಪರ್ಕ

ನಟಿ ಭೂಮಿ ಪೆಡ್ನೇಕರ್‌ ಮೇಲೂ ಸುಕೇಶ್‌ ಚಂದ್ರಶೇಖರ್‌ ದೃಷ್ಟಿ ಬಿದ್ದಿತ್ತು. 2o21ರ ಜನವರಿಯಲ್ಲಿ ನ್ಯೂಸ್‌ ಎಕ್ಸ್‌ಪ್ರೆಸ್‌ ಪೋಸ್ಟ್‌ ನಿಂದ ಎಂದು ಹೇಳಿಕೊಂಡು ಸುಕೇಶ್‌ ಅವರ ಸಹವರ್ತಿ ಪಿಂಕಿ ಇರಾನಿ ಸಂಪರ್ಕಿಸಿದ್ದರು. ನಮ್ಮ ಗ್ರೂಪ್‌ ಅಧ್ಯಕ್ಷರಾಗಿರುವ ಸೂರಜ್‌ (ಸುಕೇಶ್‌ ಚಂದ್ರಶೇಖರ್‌) ನಿಮ್ಮ ಅಭಿಮಾನಿಯಾಗಿದ್ದಾರೆ. ಒಂದು ಬೃಹತ್‌ ಯೋಜನೆ ಸಂಬಂದ ನಿಮ್ಮ ಜೊತೆ ಅವರು ಮಾತನಾಡಲು ಬಯಸುತ್ತಿದ್ದಾರೆ ಎಂದು ಭುಮಿ ಅವರನ್ನು ಸಂಪರ್ಕಿಸಿದ್ದರು. ಅಲ್ಲದೆ ಕಾರೊಂದನ್ನು ಸೂರಜ್‌ ಉಡುಗೊರೆಯಾಗಿ ನೀಡಲು ಬಯಸಿದ್ದಾರೆ ಎಂದೂ ತಿಳಿಸಿದ್ದರು. ಮೇ 2021ರಲ್ಲಿ ಕೂಡಾ ಸುಕೇಶ್‌ ಅವರು ಭೂಮಿ ಪೆಡ್ನೇಕರ್‌ ಅವರನ್ನು ಸಂಪರ್ಕಿಸಿದ್ದರು ಎನ್ನಲಾಗಿದೆ. ಆದ್ರೆ ಈ ಬಗ್ಗೆ ಇಡಿ ಬಳಿ ಹೇಳಿಕೆ ನೀಡಿರುವ ಭೂಮಿ ಪೆಡ್ನೇಕರ್‌, ನಾನು ಸುಕೇಶ್‌ ಬಳಿಯಿಂದ ಯಾವುದೇ ಉಡುಗೊರೆ ಪಡೆದಿಲ್ಲ ಎಂದು ಹೇಳಿದ್ದಾರೆ.

ಯಾರು ಈ ಸುಕೇಶ್‌ ಚಂದ್ರಶೇಖರ್‌..?

ಬೆಂಗಳೂರು  ಮೂಲದ ಸುಕೇಶ್‌ ಚಂದ್ರಶೇಖರ್‌, ತಾನು ಪ್ರಧಾನಿ ಕಚೇರಿಯ ಅಧಿಕಾರಿ ಎಂದು ನಂಬಿಸಿ ಜೈಲಲ್ಲೇ ಕುಳಿತು Ranbaxy ಕಂಪನಿಯ(Ranbaxy Company) ಮಾಜಿ ಮಾಲೀಕ ಶಿವಿಂದರ್‌ ಸಿಂಗ್‌ ಅವರ ಪತ್ನಿ ಅದಿತಿ ಸಿಂಗ್‌ ಬಳಿ ಬರೋಬ್ಬರಿ 200 ಕೋಟಿ ರು.ಗಳನ್ನು ಸುಲಿಗೆ ಮಾಡಿದ್ದ. ಅಕ್ಟೋಬರ್‌ 22ರಂದು ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಸುಕೇಶ್‌ ಹಾಗೂ ಅದಿತಿ ಸಿಂಗ್‌ ಅವರ ಸೋದರಿ ಅರುಂಧತಿ ಖನ್ನಾ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು.

Share Post