ಯಡಿಯೂರಪ್ಪ ವಿರುದ್ಧದ ಭ್ರಷ್ಟಾಚಾರ ಪ್ರಕರಣ; ಮಾಜಿ ಸಿಎಂ ರಿಲೀಫ್‌ ನೀಡಿದ ಸುಪ್ರೀಂಕೋರ್ಟ್‌

ನವದೆಹಲಿ; ಮಾಜಿ ಸಿಎಂ ಯಡಿಯೂರಪ್ಪಗೆ ಸುಪ್ರೀಂಕೋರ್ಟ್‌ ಬಿಗ್‌ ರಿಲೀಫ್‌ ನೀಡಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ಯಡಿಯೂರಪ್ಪ ವಿರುದ್ಧದ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ .

ತಮ್ಮ ವಿರುದ್ಧದ ಭ್ರಷ್ಟಾಚಾರ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ಪೂರ್ವಾನುಮತಿ ಇಲ್ಲದಿದ್ದರೂ ತನಿಖೆ ನಡೆಸುವಂತೆ ಕರ್ನಾಟಕ ಹೈಕೋರ್ಟ್‌ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು. ಹೈಕೋರ್ಟ್‌ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿದ್ದರು. ಇದಕ್ಕೆ ಒಪ್ಪಿಗೆ ಸೂಚಿಸಿರುವ ಸುಪ್ರೀಂಕೋರ್ಟ್‌, ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಿದ್ದಾರೆ. ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್‌ ಮತ್ತು ಹಿಮಾ ಕೊಹ್ಲಿ ಅವರಿರುವ ನ್ಯಾಯಪೀಠ ಈ ಆದೇಶ ನೀಡಿದೆ.

ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಅಧಿಕಾರ ದುರ್ಬಳಕೆ ಮಾಡಿಕೊಂಡು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದ ವಸತಿ ಯೋಜನೆಗಳನ್ನು ಗುತ್ತಿಗೆ ನೀಡುವ ಸಲುವಾಗಿ ರಾಮಲಿಂಗಂ ಕನ್‌ಸ್ಟ್ರಕ್ಷನ್‌ ಕಂಪನಿಯಿಂದ ಕೋಟ್ಯಂತರ ರೂಪಾಯಿ ಪಡೆದಿದ್ದಾರೆ ಎಂಬ ಆರೋಪವಿದೆ. ಜೊತೆಗೆ ಶೆಲ್ ಕಂಪನಿಗಳ ಮೂಲಕ ಲಂಚ ಪಡೆದಿದ್ದಾರೆ ಎಂದು ಆರೋಪಿಸಿ ಆರ್‌ಟಿಐ ಕಾರ್ಯಕರ್ತ ಟಿ ಜೆ ಅಬ್ರಹಾಂ ಅವರು ಖಾಸಗಿ ದೂರು ದಾಖಲಿಸಿದ್ದರು.

ರಾಜ್ಯಪಾಲರು ಪೂರ್ವಾನುಮತಿ ನೀಡದ ಕಾರಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತ್ತು. ಬಳಿಕ ಅಬ್ರಹಾಂ ಅವರು ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಯಡಿಯೂರಪ್ಪ ಮತ್ತು ಇತರರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದ ಖಾಸಗಿ ದೂರನ್ನು ಮರುಪರಿಗಣಿಸಲು ಹೈಕೋರ್ಟ್ ಆದೇಶ ಮಾಡಿತ್ತು. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಲೋಕಾಯುಕ್ತ ತನಿಖೆಗೆ ಆದೇಶಿಸಿತ್ತು.

ಯಡಿಯೂರಪ್ಪ, ಪುತ್ರ ಬಿ ವೈ ವಿಜಯೇಂದ್ರ, ಪುತ್ರಿ ಪದ್ಮಾವತಿ ಅವರ ಅಳಿಯ ಸಂಜಯ್ ಶ್ರೀ, ಶಶಿಧರ ಮರಡಿ, ಚಂದ್ರಕಾಂತ್ ರಾಮಲಿಂಗಂ, ಅಂದಿನ ಬಿಡಿಎ ಅಧ್ಯಕ್ಷ ಮತ್ತು ಹಾಲಿ ಸಹಕಾರ ಸಚಿವ ಎಸ್ ಟಿ ಸೋಮಶೇಖರ್, ಐಎಎಸ್ ಅಧಿಕಾರಿ ಡಾ. ಜಿ ಸಿ ಪ್ರಕಾಶ್, ಕೆ ರವಿ, ಯಡಿಯೂರಪ್ಪ ಅವರ ಅಳಿಯ ವಿರೂಪಾಕ್ಷಪ್ಪ ಯಮಕನಮರಡಿ ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು.

Share Post

Leave a Reply

Your email address will not be published.