ದೆಹಲಿಯ ರಾಜಪಥ್‌ ಹೆಸರು ಬದಲು; ಇನ್ಮೇಲೆ ಇದು ಕರ್ತವ್ಯ ಪಥ್

ನವದೆಹಲಿ; ದೆಹಲಿಯ ರಾಜಪಥಕ್ಕೆ ಕರ್ತವ್ಯ ಪಥ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ನವದೆಹಲಿ ಮುನ್ಸಿಪಲ್ ಕೌನ್ಸಿಲ್ ಅನುಮೋದನೆ ನೀಡಿದೆ. ಕೇಂದ್ರ ವಿದೇಶಾಂಗ ವ್ಯವಹಾರ ಮತ್ತು ಸಂಸ್ಕೃತಿ ಖಾತೆ ರಾಜ್ಯ ಸಚಿವೆ ಹಾಗೂ ಎನ್‌ಡಿಎಂಸಿ ಸದಸ್ಯರೂ ಆಗಿರುವ ಮೀನಾಕ್ಷಿ ಲೇಖಿ ಅವರ ನೇತೃತ್ವದಲ್ಲಿ ನಡೆದ ವಿಶೇಷ ಎನ್‌ಡಿಎಂಸಿ ಸಭೆ ಬಳಿಕ ಪ್ರಸ್ತಾವನೆಯನ್ನು ಅಂಗೀಕರಿಸಿರುವುದಾಗಿ ಅವರು ತಿಳಿಸಿದ್ಧಾರೆ.

‘ವಿಶೇಷ ಕೌನ್ಸಿಲ್ ಸಭೆಯಲ್ಲಿ ರಾಜಪಥಕ್ಕೆ ಕರ್ತವ್ಯ ಪಥ ಎಂದು ಮರು ನಾಮಕರಣ ಮಾಡುವ ಪ್ರಸ್ತಾವವನ್ನು ಅಂಗೀಕರಿಸಲಾಗಿದೆ’ ಎಂದು ಮೀನಾಕ್ಷಿ ಲೇಖಿ ತಿಳಿಸಿದ್ದಾರೆ. ಈ ಕುರಿತಂತೆ ಎನ್‌ಡಿಎಂಸಿಗೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದ ಪ್ರಸ್ತಾವನೆ ಬಂದಿತ್ತು ಎಂದು ಎನ್‌ಡಿಎಂಸಿ ಉಪಾಧ್ಯಕ್ಷ ಸತೀಶ್ ಉಪಾಧ್ಯಾಯ ಹೇಳಿದ್ದಾರೆ. ಇನ್ನುಮುಂದೆ ಇಂಡಿಯಾ ಗೇಟ್‌ನಲ್ಲಿರುವ ನೇತಾಜಿ ಪ್ರತಿಮೆಯಿಂದ ರಾಷ್ಟ್ರಪತಿ ಭವನದವರೆಗಿನ ಸಂಪೂರ್ಣ ಪ್ರದೇಶವನ್ನು ‘ಕರ್ತವ್ಯ ಪಥ’ ಎಂದು ಕರೆಯಲಾಗುವುದು ಎಂದು ಅವರು ಹೇಳಿದರು.

ಏನಿದು ರಾಜ್‌ಪಥ್‌..?

ರಾಜಪಥ… ಸ್ವತಂತ್ರ ಭಾರತದಲ್ಲಿ ಹಲವು ತಲೆಮಾರುಗಳು ಈ ಹೆಸರನ್ನು ಕೇಳುತ್ತಲೇ ಬೆಳೆದಿವೆ. ಗಣರಾಜ್ಯೋತ್ಸವ ಅಂದಾಕ್ಷಣ ದೆಹಲಿಯ ರಾಜಪಥ ನೆನಪಿಗೆ ಬರುತ್ತದೆ. ರಾಜಪಥದಲ್ಲಿ ಕುಳಿತು ಗಣರಾಜ್ಯೋತ್ಸವದ ಪರೇಡ್ ಮತ್ತು ಸೇನಾ ಕವಾಯತುಗಳನ್ನು ನೋಡುವುದೇ ಒಂದು ರೋಮಾಂಚನ. ಈಗ ಅದರ ಹೆಸರನ್ನು ಬದಲಾಯಿಸುವ ತೀರ್ಮಾನ ಮಾಡಲಾಗಿದೆ. ಸೆಂಟ್ರಲ್ ವಿಸ್ಟಾ ಯೋಜನೆಯ ಭಾಗವಾಗಿ ಸುಮಾರು ಮೂರೂವರೆ ಕಿಲೋಮೀಟರ್ ಉದ್ದದ ರಾಜಪಥದ ರೂಪವನ್ನೇ ಬದಲಾಯಿಸಲಾಗಿದೆ. ಈಗ ಅದಕ್ಕೆ ‘ಕರ್ತವ್ಯಪಥ’ ಎಂದು ಹೆಸರಿಡಲು ತೀರ್ಮಾನಿಸಲಾಗಿದೆ.

ಮೊದಲ ಹೆಸರು ‘ಕಿಂಗ್ಸ್‌ವೇ’

‘ನವದೆಹಲಿ’ ನಿರ್ಮಾಣ ಪೂರ್ಣಗೊಂಡಾಗ, ವೈಸ್‌ರಾಯ್‌ ಹೌಸ್‌ನಿಂದ (ಇಂದಿನ ರಾಷ್ಟ್ರಪತಿ ಭವನ) ಇಂಡಿಯಾ ಗೇಟ್‌ವರೆಗಿನ ರಸ್ತೆಗೆ ‘ಕಿಂಗ್ಸ್‌ವೇ’ ಎಂದು ಹೆಸರಿಸಲಾಯಿತು. ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನ ಪ್ರೊಫೆಸರ್ ಪರ್ಸಿವಲ್ ಸ್ಪಿಯರ್ ಅವರು ಈ ಹೆಸರನ್ನು ನೀಡಿದರು. ಆ ಕಾಲೇಜಿನಲ್ಲಿ 1924-40ರವರೆಗೆ ಅವರು ಇತಿಹಾಸದ ಬೋಧಕರಾಗಿದ್ದರು. ಹೊಸದಿಲ್ಲಿಯ ಬಹುತೇಕ ರಸ್ತೆಗಳಿಗೆ ಆಗಿನ ಬ್ರಿಟಿಷ್ ಸರ್ಕಾರವು ಪರ್ಸಿವಲ್ ಅವರ ಸಲಹೆಯ ಮೇರೆಗೆ ಹೆಸರುಗಳನ್ನು ನಾಮಕರಣ ಮಾಡಿತು. ಅಕ್ಬರ್ ರಸ್ತೆ, ಪೃಥ್ವಿರಾಜ್ ರಸ್ತೆ, ಷಹಜಹಾನ್ ರಸ್ತೆ ಇವುಗಳಲ್ಲಿ ಕೆಲವು. ಅವರು ಶಿಕ್ಷಕರಷ್ಟೇ ಅಲ್ಲ ಸಂಶೋಧಕರೂ ಹೌದು. ಅವರು ಭಾರತೀಯ ಇತಿಹಾಸದ ಬಗ್ಗೆ ಪುಸ್ತಕಗಳನ್ನು ಸಹ ಬರೆದಿದ್ದಾರೆ.

ಸ್ವಾತಂತ್ರ್ಯದ ನಂತರ ‘ರಾಜಪಥ’

  ದೇಶದ ಸ್ವಾತಂತ್ರ್ಯದ ನಂತರ 1961 ರಲ್ಲಿ ಕಿಂಗ್ಸ್‌ ವೇ  ಹೆಸರನ್ನು ‘ರಾಜಪಥ’ ಎಂದು ಬದಲಾಯಿಸಲಾಯಿತು.

ಎಲ್ಲಿಂದ ಎಲ್ಲಿಗೆ?

ರೈಜಿನಾ ಹಿಲ್ಸ್‌ನಲ್ಲಿರುವ ರಾಷ್ಟ್ರಪತಿ ಭವನದಿಂದ ವಿಜಯ್ ಚೌಕ್ ಮೂಲಕ ಇಂಡಿಯಾ ಗೇಟ್‌ಗೆ ಹೋಗುವ ಮಾರ್ಗವನ್ನು ‘ರಾಜ್‌ಪಥ್’ ಎಂದು ಕರೆಯಲಾಗುತ್ತದೆ. ಇಲ್ಲಿ ಪ್ರತಿ ವರ್ಷ ಗಣರಾಜ್ಯೋತ್ಸವ ಪರೇಡ್ ನಡೆಯುತ್ತದೆ.

Share Post

Leave a Reply

Your email address will not be published.