ಬಾದಾಮಿಯಲ್ಲಿ ಐಟಿಸಿ ಪಂಚತಾರಾ ಹೋಟೆಲ್‌ ಸ್ಥಾಪನೆಗೆ ಸಚಿವ ನಿರಾಣಿ ಸಲಹೆ

ನವದೆಹಲಿ; ಐತಿಹಾಸಿಕ ಪ್ರವಾಸಿ ತಾಣ ಬಾದಾಮಿ‌ಯಲ್ಲಿ ಪಂಚತಾರಾ ಹೋಟೆಲ್ ಸ್ಥಾಪಿಸಲು ಐಟಿಸಿ ಮುಖ್ಯಸ್ಥರಿಗೆ ಬೃಹತ್ ಮತ್ತು ಮಧ್ಯಮ‌ ಕೈಗಾರಿಕಾ ಸಚಿವ ಮುರುಗೇಶ ಆರ್. ನಿರಾಣಿ ಸಲಹೆ ನೀಡಿದ್ದಾರೆ. ಜಾಗತಿಕ ಹೂಡಿಕೆದಾರ ಸಮಾವೇಶದ ರೋಡ್‌ಶೋ ಭಾಗವಾಗಿ ದೆಹಲಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ, ಐಟಿಸಿಯ ಸಿಎಂಡಿ ಸಂಜೀವ್ ಪುರಿ, ಕಂಪನಿಯ ಉಪಾಧ್ಯಕ್ಷ ಅನಿಲ್ ರಜಪುತ್ ಅವರನ್ನು ಸಚಿವ ನಿರಾಣಿ ಭೇಟಿಯಾಗಿ ಮಾತುಕತೆ ನಡೆಸಿದರು.

ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲು ರಾಜ್ಯದ ಪ್ರಮುಖ ಪ್ರವಾಸಿ ‌ತಾಣಗಳಾಗಿದ್ದು, ಈ ಭಾಗದಲ್ಲಿ ಪಂಚತಾರಾ ಹೋಟೆಲ್ ಸ್ಥಾಪಿಸಿದರೆ ಪ್ರವಾಸಿಗರಿಗೆ ಅನುಕೂಲವಾಗುವುದು ಎಂದು ಸಚಿವರು ಸಲಹೆ ನೀಡಿದರು. ಹೋಟೆಲ್ ಸ್ಥಾಪನೆಯ ಸಾಧ್ಯತೆ ಬಗ್ಗೆ ಪರಿಶೀಲಿಸಿ, ಸೂಕ್ತ‌ ನಿರ್ಧಾರ ಕೈಗೊಳ್ಳಲಾಗುವುದು ಎಂದು ಐಟಿಸಿ ಮುಖ್ಯಸ್ಥ ಸಂಜೀವ್ ಪುರಿ ತಿಳಿಸಿದರು. ಕರ್ನಾಟಕದಲ್ಲಿ ಹೂಡಿಕೆ ಹಾಗೂ ಉದ್ಯಮ‌ ವಿಸ್ತರಣೆಗೆ ಇರುವ ಅವಕಾಶಗಳ ಮಾಹಿತಿ ನೀಡಿದ ಸಚಿವರು, ನವೆಂಬರ್ 2 ರಿಂದ 4ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಭೆಗೆ ಔಪಚಾರಿಕವಾಗಿ ಆಹ್ವಾನಿಸಿದರು.

ಸಭೆಯಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ‌ ಇಲಾಖೆ ರಮಣರೆಡ್ಡಿ, ಕೈಗಾರಿಕಾಭಿವೃದ್ಧಿ ಆಯುಕ್ತರಾದ ಗುಂಜನ್ ಕೃಷ್ಣ, ಐಕೆಎಫ್ ಮಂಡಳಿ ಸದಸ್ಯರು, ಎಫ್‌ಕೆಸಿಸಿ ಅಧ್ಯಕ್ಷ ಉಲ್ಲಾಸ್ ಕಾಮತ್ ಹಾಗೂ‌ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Share Post

Leave a Reply

Your email address will not be published.