ಗಣೇಶೋತ್ಸವ ಫ್ಲೆಕ್ಸ್‌ನಲ್ಲಿ ಸಾವರ್ಕರ್‌ ಫೋಟೋ; ಅಧಿಕಾರಿಗಳಿಂದ ತೆರವು

ತುಮಕೂರು; ಗಣೇಶೋತ್ಸವದ ಹಿನ್ನೆಲೆಯಲ್ಲಿ ಅಳವಡಿಸಲಾದ ಫ್ಲೆಕ್ಸ್‌ಗಳಲ್ಲಿ ಸಾವರ್ಕರ್‌ ಫೋಟೋ ಹಾಕಲಾಗಿದ್ದು, ಅವುಗಳನ್ನು ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್​​ನಿಂದ ತುಮಕೂರು ನಗರದ ಐದು ಕಡೆ ಫ್ಲೆಕ್ಸ್ ಅಳವಡಿಸಲು ಅನುಮತಿ ಪಡೆಯಲಾಗಿತ್ತು. ಆದ್ರೆ, ಅದ್ರಲ್ಲಿ ಸಾವರ್ಕರ್‌ ಫೋಟೋ ಅಳವಡಿಸಿದ್ದ ಕಾರಣ ಅವುಗಳನ್ನು ತೆಗೆಸಲಾಗಿದೆ. ಇದಕ್ಕೆ ಹಿಂದೂ ಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. 

   ಪಾಲಿಕೆಯ ಅಧಿಕಾರಿಗಳ ಪ್ರಕಾರ ಜಯನಗರದಲ್ಲಿರುವ ಪ್ರದೇಶದಲ್ಲಿ ಫ್ಲೆಕ್ಸ್ ಅಳವಡಿಸಲು ಅನುಮತಿ ಪಡೆದಿಲ್ಲ. ಆದರೂ ಟ್ರಾನ್ಸ್ ಫಾರ್ಮರ್ ಬಳಿ ಫ್ಲೆಕ್ಸನ್ನು ಅಳವಡಿಸಲಾಗಿದೆ ಎಂಬ ಕಾರಣವನ್ನು ನೀಡಿದ್ದಾರೆ. ನಿನ್ನೆ ಸಂಜೆ ಫ್ಲೆಕ್ಸ್ ತೆರವುಗೊಳಿಸಲು ಮುಂದಾಗಿದ್ದ ಪಾಲಿಕೆ ಅಧಿಕಾರಿಗಳು, ಪೊಲೀಸರ ಹಾಗೂ ಬಜರಂಗದಳ ಕಾರ್ಯಕರ್ತರ ನಡುವೆ ಸಾಕಷ್ಟು ವಾಗ್ವಾದ ನಡೆದಿದೆ. ನಂತರ ಫ್ಲೆಕ್ಸ್ ತೆರವುಗೊಳಿಸುವುದಿಲ್ಲ ಎಂದು ಹೊರಟು ಹೋಗಿದ್ದರು. ಆದರೆ ರಾತ್ರೋರಾತ್ರಿ ಬಂದು ಫ್ಲೆಕ್ಸ್ ತೆರವುಗೊಳಿಸಲಾಗಿದೆ ಎಂದು ಹಿಂದೂ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

Share Post