ಪೊಲೀಸ್‌ ಕಸ್ಟಡಿಯಲ್ಲಿದ್ದ ವ್ಯಕ್ತಿ ಸಾವು; 8 ಪೊಲೀಸರ ಮೇಲೆ ಎಫ್‌ಐಆರ್‌

ಮೈಸೂರು: ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಕಸ್ಟಡಿಯಲ್ಲಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ವ್ಯಕ್ತಿಯ ತಾಯಿ ನೀಡಿದ ದೂರಿನ ಆಧಾರದಲ್ಲಿ ಎಂಟು ಪೊಲೀಸರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ಸಿದ್ದರಾಜು ಪೊಲೀಸ್‌ ಕಸ್ಟಡಿಯಲ್ಲಿ ಮೃತಪಟ್ಟಿರುವ ವ್ಯಕ್ತಿ. ಅವರ ತಾಯಿ ಮಹದೇವಪ್ಪ ಭಾನುವಾರ ಪೊಲೀಸರು ವಿರುದ್ಧ ದೂರು ನೀಡಿದ್ದರು. ನನ್ನ ಮಗ ಸಿದ್ದರಾಜು ನಮ್ಮೂರಿನ ವಿವಾಹಿತೆಯೊಬ್ಬಳೊಂದಿಗೆ 5 ವರ್ಷಗಳ ಹಿಂದೆ ಅನೈತಿಕ ಸಂಬಂಧ ಹೊಂದಿದ್ದ. ಎರಡು ವರ್ಷಗಳ ಹಿಂದೆ ಸಂಬಂಧ ಕಡಿದುಕೊಂಡು ಮದ್ಯ ವ್ಯಸನಿಯಾಗಿದ್ದ.‌ ಗಾರೆ ಕೆಲಸದಿಂದ ದುಡಿದ ಹಣವನ್ನು ಕುಡಿತಕ್ಕೆ ಖರ್ಚು ಮಾಡುತ್ತಿದ್ದ. ಮಹಿಳೆ ಹಾಗೂ ನನ್ನ ಮಗನ ನಡುವೆ ಹಲವು ಬಾರಿ ಗಲಾಟೆ ನಡೆದು, ನಾಲ್ಕೈದು ಬಾರಿ ಠಾಣೆಗೂ ದೂರು ‌ನೀಡಲಾಗಿತ್ತು ಎಂದು ಮೃತನ ತಾಯಿ ಮಹದೇವಮ್ಮ ಹೇಳಿಕೊಂಡಿದ್ದಾರೆ.

ನವೆಂಬರ್‌ 27 ರ ಸಂಜೆ 6:30ರ ಸುಮಾರಿನಲ್ಲಿ ಮಹಿಳೆ, ಆಕೆಯ ತಂದೆ, ತಾಯಿ ಸಹೋದರ, ನಾಲ್ವರು ಸಂಬಂಧಿಕರು ನನ್ನ ಮಗನ ಕೈಕಾಲು ಕಟ್ಟಿ ಹಾಕಿ ಹಲ್ಲೆ ನಡೆಸಿದ್ದಾರೆ. ನಂತರ 112 ಸಹಾಯವಾಣಿಗೆ ಕರೆ ಮಾಡಿ ಪೊಲೀಸರಿಗೆ ದೂರು ನೀಡಿದ್ದರು. ನಂಜನಗೂಡು ಪೊಲೀಸರು ಆತನನ್ನು ವಶಕ್ಕೆ ಪಡೆದು ಕರೆದುಕೊಂಡು ಹೋಗಿದ್ದರು. ಅಸ್ವಸ್ಥಗೊಂಡಿದ್ದ ವ್ಯಕ್ತಿಯನ್ನು ನ.28 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಮಧ್ಯಾಹ್ನ ಮೃತಪಟ್ಟ ಎಂಬ ವಿಚಾರ ತಿಳಿದು ಬಂದಿದೆ. ಮಗನ ಸಾವಿಗೆ ಕಾರಣರಾದವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಿದ್ದಾರೆ.

Share Post