ಹೊಟ್ಟೆಯಲ್ಲಿತ್ತು ಕೊಕೇನ್‌ ಕ್ಯಾಪ್ಸೂಲ್ಸ್‌; 13.6 ಕೋಟಿ ಮೌಲ್ಯದ ಡ್ರಗ್ಸ್‌ ವಶ..!

ದೇವನಹಳ್ಳಿ;  ಹೊಟ್ಟೆಯಲ್ಲಿ ಕ್ಯಾಪ್ಸೂಲ್‌ ರೂಪದಲ್ಲಿ ಕೊಕೇನ್‌ ಸಾಗಿಸುತ್ತಿದ್ದ ಆರೋಪಿಯೊಬ್ಬನನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿ  104 ಕೊಕೇನ್ ಕ್ಯಾಪ್ಸುಲ್​ಗಳನ್ನು ನುಂಗಿ ಮಾದಕ ವಸ್ತು ಕಳ್ಳ ಸಾಗಾಣಿಕೆ ಮಾಡುತ್ತಿದ್ದ. ಆತನ ಹೊಟ್ಟೆಯಲ್ಲಿದ್ದ ಬರೋಬ್ಬರಿ 13.6 ಕೋಟಿ ಮೌಲ್ಯದ 104 ಕೊಕೇನ್ ಕ್ಯಾಪ್ಸುಲ್ ಗಳನ್ನು ವಶಕ್ಕೆ ಪಡೆಯಲಾಗಿದೆ.

    ಕಳೆದ ಸೋಮವಾರ ಇಥಿಯೋಪಿಯದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕನನ್ನು ಬೆಂಗಳೂರು ಕಸ್ಟಮ್ಸ್ ಇಂಟಲಿಜೆನ್ಸ್ ಯುನಿಟ್ (CIU) ಅಧಿಕಾರಿಗಳು ಸಂಶಯಗೊಂಡು ವಿಚಾರಣೆ ನಡೆಸಿದರು. ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಬಂಧಿತ ವ್ಯಕ್ತಿ ಘಾನದಬಾಹ್ ಅಂಪಾಡು ಕ್ವಾಡ್ವೋ (53) ಎಂದು ಗುರುತಿಸಲಾಗಿದೆ. ಆರೋಪಿ ಅಡಿಸ್ ಅಬಾಬಾದಿಂದ ಇಥಿಯೋಪಿಯನ್ ಏರ್​ಲೈನ್ಸ್​ ಫ್ಲೈಟ್ ET 690 ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ.

    ಸಂಶಯದ ಮೇರೆಗೆ ಕಸ್ಟಮ್ಸ್ ಅಧಿಕಾರಿಗಳು ಆರೋಪಿಯನ್ನು ಆಸ್ಪತ್ರೆಗೆ ಕರೆದೊಯ್ದು ವೈದಕೀಯ ತಪಾಸಣೆ ನಡೆಸಿದಾಗ ಆತನ ಕಿಬ್ಬೊಟ್ಟೆಯಲ್ಲಿ ಕ್ಯಾಪ್ಸುಲ್​ಗಳನ್ನು ತೋರಿಸಿದೆ. ಬಹಳ ಎಚ್ಚರಿಕೆಯಿಂದ 104 ಕ್ಯಾಪ್ಸುಲ್​ಗಳನ್ನು ಹೊರಗೆ ತೆಗೆಯಲಾಗಿದೆ. ಮೂರು ದಿನದೊಳಗೆ ಕ್ಯಾಪ್ಸುಲ್​ಗಳನ್ನು ಹೊರಗೆ ತೆಗೆಯದಿದ್ದಲ್ಲಿ ಆತನ ಜೀವಕ್ಕೆ ಅಪಾಯ ಇತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಆರೋಪಿಯಿಂದ ಒಟ್ಟು 1.2 ಕೆಜಿಯ 104 ಕ್ಯಾಪ್ಸುಲ್ ಗಳನ್ನು ವಶಕ್ಕೆ ಪಡೆಯಲಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಬೆಲೆ 13.6 ಕೋಟಿ ಎಂದು ಅಂದಾಜಿಸಲಾಗಿದೆ. ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.

Share Post

Leave a Reply

Your email address will not be published.