ರಜಿನಿಕಾಂತ್‌ ಪುತ್ರಿ ಮನೆಯಲ್ಲಿ ಕಳ್ಳತನ; ಭಾರಿ ಪ್ರಮಾಣದ ಚಿನ್ನಾಭರಣ, ನಗದು ಕಳವು

ಚೆನ್ನೈ; ನಟ ರಜಿನಿಕಾಂತ್‌ ಅವರ ಪುತ್ರಿ ಐಶ್ವರ್ಯಾ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಫೆಬ್ರವರಿಯಲ್ಲೇ ಈ ಕಳ್ಳತನ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. ಐಶ್ವರ್ಯಾ ಅವರು ಈ ಬಗ್ಗೆ ಚೆನ್ನೈನ ತೆನಾಂಪೇಟ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಐಶ್ವರ್ಯಾ ಅವರು ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಸಮಯ ನೋಡಿಕೊಂಡು ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ೬೦ ಪವನ್‌ ಚಿನ್ನ, ವಜ್ರದ ಆಭರಣ, ಸಹೋದರಿಯ ಮದುವೆಗೆ ಬಳಸಿದ್ದ ಒಡವೆ, ವಜ್ರದ ಸೆಟ್, ಪುರಾತನ ಕಾಲದ ಚಿನ್ನಾಭರಣ, ಬಳೆಗಳು, ನವರತ್ನ ಸೆಟ್ ಗಳು ಕಳುವಾಗಿವೆಯಂತೆ.

ಮನೆಯ ಲಾಕರ್‌ನಲ್ಲಿ ಆಭರಣಗಳನ್ನು ಇರಿಸಲಾಗಿತ್ತು. ಅದರ ಬಗ್ಗೆ ಮನೆಯ ಕೆಲವು ಕೆಲಸದಾಳುಗಳಿಗೆ ಗೊತ್ತಿತ್ತು ಎಂದು ಐಶ್ವರ್ಯಾ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Share Post