ಶಿವಣ್ಣನ ಮನೆಗೆ ಸುರ್ಜೇವಾಲ ಭೇಟಿ; ಮಧು ಬಂಗಾರಪ್ಪಗೆ ಸಚಿವಗಿರಿ ಖಾತ್ರಿಯಾಯ್ತಾ..?

ಬೆಂಗಳೂರು; ಶಿವರಾಜ್‌ ಕುಮಾರ್‌ ದಂಪತಿ ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದರು. ಇದಕ್ಕೆ ಕಾರಣ ಮಧು ಬಂಗಾರಪ್ಪ ಅವರು. ಸೊರಬ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಮಧು ಬಂಗಾರಪ್ಪ ಅವರು ಗೀತಾ ಶಿವರಾಜ್‌ ಕುಮಾರ್‌ ಅವರ ಸಹೋದರ. ಮಧು ಬಂಗಾರಪ್ಪ ಅವರ ಒತ್ತಾಯದ ಮೇರೆಗೆ ಶಿವರಾಜ್‌ ಕುಮಾರ್‌ ಹಾಗೂ ಗೀತಾ ಶಿವರಾಜ್‌ ಕುಮಾರ್‌ ಅವರು ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪರ ಪ್ರಚಾರ ಮಾಡಿದ್ದರು. ಮಧು ಬಂಗಾರಪ್ಪ ಅವರು ಕೂಡಾ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸಚಿವ ಸ್ಥಾನ ಸಿಗುತ್ತದೆ ಎಂದು ಬಯಸಿದ್ದರು. ಶಿವರಾಜ್‌ ಕುಮಾರ್‌ ಅವರು ಕೂಡಾ ತಮ್ಮ ಬಾಮೈದನಿಗೆ ಸಚಿವ ಸ್ಥಾನ ಸಿಗುತ್ತೆ ಎಂದು ಹೇಳಿದ್ದರು. ಆದ್ರೆ, ಈಗ ಮಧು ಬಂಗಾರಪ್ಪ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಇದರಿಂದಾಗಿ ಮಧು ಬಂಗಾರಪ್ಪ ಮುನಿಸಿಕೊಂಡಿದ್ದಾರೆ. ಈ ನಡುವೆ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಶಿವರಾಜ್‌ ಕುಮಾರ್‌ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

ಮೊದಲ ಹಂತದಲ್ಲೇ ಮಧು ಬಂಗಾರಪ್ಪ ಮಂತ್ರಿ ಸ್ಥಾನ ಬಯಸಿದ್ದರು. ಆದ್ರೆ ಮಧು ಬಂಗಾರಪ್ಪ ಅವರಿಗೆ ಸಿಕ್ಕಿಲ್ಲ. ಇದರಿಂದ ಅವರು ಅಸಮಾಧಾನ ಹೊರಹಾಕಿದ್ದರು. ಈ ನಡುವೆ ಸುರ್ಜೇವಾಲಾ ಶಿವರಾಜ್‌ ಕುಮಾರ್‌ ಅವರ ಮನೆಗೆ ಭೇಟಿ ನೀಡಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಶಿವರಾಜ್‌ ಕುಮಾರ್‌ ಅವರು ಪ್ರಚಾರಕ್ಕೆ ಬಂದಿದ್ದಕ್ಕೆ ಧನ್ಯವಾದ ಹೇಳೋದಕ್ಕೆ ಸುರ್ಜೇವಾಲಾ ಬಂದಿದ್ದರು ಎಂದು ಹೇಳಲಾಗುತ್ತಿದ್ದರೂ, ಮಧು ಬಂಗಾರಪ್ಪ ಅವರನ್ನು ಸಮಾಧಾನ ಮಾಡೋದೇ ಇದರ ಹಿಂದಿನ ಉದ್ದೇಶವಾಗಿತ್ತು ಅನ್ನೋ ಮಾತು ಕೇಳಿಬರುತ್ತಿದೆ.

  ಮಧು ಬಂಗಾರಪ್ಪ ಅವರು ರಾಜ್ಯದ ಹಲವು ಕಡೆ ಸುತ್ತಾಟ ನಡೆಸಿದ್ದರು. ಪ್ರಣಾಳಿಕಾ ಸಮಿತಿ ಸದಸ್ಯರೂ ಆಗಿದ್ದರು. ಹಲವರ ಗೆಲುವಿಗೆ ಶ್ರಮಿಸಿದ್ದ ಮಧು ಬಂಗಾರಪ್ಪ ಮಂತ್ರಿ ಸ್ಥಾನ ಬಯಸಿದ್ದು ಸ್ವಾಭಾವಿಕ. ಆದ್ರೆ, ಹೈಕಮಾಂಡ್‌ ಮೊದಲ ಹಂತದಲ್ಲಿ ಸಚಿವ ಸ್ಥಾನ ಕೊಟ್ಟಿಲ್ಲ. ಹೀಗಾಗಿ ಅವರು, ಸಿಎಂ, ಡಿಸಿಎಂ ಪ್ರಮಾಣವಚನ ಸಮಾರಂಭಕ್ಕೂ ಬಂದಿರಲಿಲ್ಲ. ಹೀಗಾಗಿಯೇ ಸುರ್ಜೇವಾಲಾ ಶಿವರಾಜ್‌ಕುಮಾರ್‌ ನಿವಾಸಕ್ಕೆ ಭೇಟಿ ನೀಡಿದ್ದರು ಎಂದು ಹೇಳಲಾಗುತ್ತಿದೆ. ಆದ್ರೆ ಯಾಕೆ ಬಂದಿದ್ರು ಅನ್ನೋದನ್ನು ಪಕ್ಷವಾಗಲೀ, ಶಿವರಾಜ್‌ ಕುಮಾರ್‌ ಅವರಾಗಲೀ ದೃಢಪಡಿಸಿಲ್ಲ.
Share Post