ಪ್ರೋಟೀನ್‌ ಪೌಡರ್‌ ಬಗ್ಗೆ ಬಿಸಿಬಿಸಿ ಚರ್ಚೆ; ಕ್ರಮಕ್ಕೆ ಆಗ್ರಹ

ಬೆಂಗಳೂರು; ವಿಧಾನಸಭಾ ಕಲಾಪದಲ್ಲಿ ಇಂದು ಪ್ರೋಟೀನ್ ಪೌಡರ್​ಗಳ ದುರ್ಬಳಕೆಯ ಬಿಸಿಬಿಸಿ ಚರ್ಚೆ ನಡೆಯಿತು. ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್​ ರೆಡ್ಡಿ ಜಿಮ್​ಗಳಲ್ಲಿ ಬಳಕೆ ಮಾಡುವ ಪ್ರೋಟೀನ್ ಪೌಡರ್‌ನ ಅಡ್ಡಪರಿಣಾಮಗಳ ಬಗ್ಗೆ ಸದನದ ಗಮನ ಸೆಳೆದರು. ಜಿಮ್​ಗಳಲ್ಲಿ ಅಕ್ರಮವಾಗಿ ಈ ಪೌಡರ್‌ ಮಾರಾಟ ಮಾಡುತ್ತಿದ್ದಾರೆ. ನನ್ನ ಕ್ಷೇತ್ರದ ಸಂತೋಷ್ ಎಂಬ ಯುವಕ ಇಂತಹ ಪ್ರೋಟೀನ್‌ ಪೌಡರ್‌ ಸೇವಿಸಿ ಅವನ ಎಲ್ಲಾ ಅಂಗಗಳೂ ವಿಫಲವಾಗಿವೆ. ಚಿಕಿತ್ಸೆಗಾಗಿ ಆತ ಐವತ್ತು ಲಕ್ಷ ರೂಪಾಯಿ ಖರ್ಚು ಮಾಡಬೇಕಾಗಿ ಬಂತು ಎಂದು ಶಾಸಕ ಸತೀಶ್‌ ರೆಡ್ಡಿ ಹೇಳಿದರು.

ಇದಕ್ಕೆ ಉತ್ತರ ನೀಡಿದ ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ, ಪ್ರೋಟೀನ್ ಪೌಡರ್​ ಅಕ್ರಮವಾಗಿ ಮಾರಾಟ ಮಾಡುತ್ತಿದ್ದರೆ ಕ್ರಮ ಜರುಗಿಸುತ್ತೇವೆ. ಇದನ್ನು ಗಂಭೀರವಾಗಿ ಪರಿಗಣಿಸಿ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಮಧ್ಯಪ್ರವೇಶಿಸಿ ಮಾತನಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಇದು ಗಂಭೀರ ಪ್ರಕರಣ. ಆರೋಗ್ಯ, ಗೃಹ, ಹಾಗೂ ಆಹಾರ ಇಲಾಖೆಗಳ ಸಚಿವರು ಸಭೆ ಮಾಡಿ ತೀರ್ಮಾನ ಕೈಗೊಳ್ಳಿ’ ಎಂದು ಸಲಹೆ ನೀಡಿದರು.

ಈ ವೇಳೆ ಮಾತನಾಡಿದ ಆರೋಗ್ಯ ಸಚಿವ ಡಾ ಕೆ.ಸುಧಾಕರ್, ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ನಮ್ಮ ಇಲಾಖೆ ಗಮನಹರಿಸಿದೆ. ಆ ಪೌಡರ್ ವೈಜ್ಞಾನಿಕವಾಗಿ ಇದೆಯೋ, ಇಲ್ವೋ ಎಂಬುದರ ಪರಿಶೀಲನೆ ಮಾಡುತ್ತೇವೆ ಎಂದು ಭರವಸೆ ನೀಡಿದರು.

Share Post

Leave a Reply

Your email address will not be published.