ಕಾಂಗ್ರೆಸ್‌ ಗ್ಯಾರೆಂಟಿ; ಉಚಿತ ಕೊಡುಗೆಗಗಳು ಲಾಭವೂ ಹೌದು, ನಷ್ಟವೂ ಹೌದು..!

ಬೆಂಗಳೂರು;  ಕಾಂಗ್ರೆಸ್‌ ಪಕ್ಷ ಹಲವು ಉಚಿತ ಗ್ಯಾರೆಂಟಿಗಳನ್ನು ನೀಡೋದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿತ್ತು. ಅದರಲ್ಲಿ ಪ್ರಮುಖವಾದುದು ಐದು ಗ್ಯಾರೆಂಟಿಗಳು. ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ, ಪ್ರತಿ ಮನೆಗೆ ಪ್ರತಿ ತಿಂಗಳೂ 200 ಯೂನಿಟ್‌ ಉಚಿತ ವಿದ್ಯುತ್‌, ಬಿಪಿಎಲ್‌ ಕಾರ್ಡ್‌ದಾರರಿಗೆ ಅನ್ನಭಾಗ್ಯ ಯೋಜನೆಯಡಿ ನೀಡುತ್ತಿರುವ ಉಚಿತ ಅಕ್ಕಿ ಹತ್ತು ಕೆಜಿಗೆ ಏರಿಸುವುದು, ನಿರುದ್ಯೋಗಿ ಪದವೀಧರರಿಗೆ ಎರಡು ವರ್ಷದ ಕಾಲ ತಿಂಗಳಿಗೆ 3 ಸಾವಿರ, ನಿರುದ್ಯೋಗಿ ಡಿಪ್ಲೊಮಾದಾರರಿಗೆ ಎರಡು ವರ್ಷದವರೆಗೆ ತಿಂಗಳಿಗೆ ಒಂದೂವರೆ ಸಾವಿರ ನೀಡುವುದು ಹಾಗೂ ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣ ವ್ಯವಸ್ಥೆ. ಇವು ಕಾಂಗ್ರೆಸ್‌ ಘೋಷಣೆ ಮಾಡಿರುವ ಐದು ಗ್ಯಾರೆಂಟಿಗಳು ಇವೆಲ್ಲವನ್ನೂ ಕಾರ್ಯರೂಪಕ್ಕೆ ತರಲು ಕಾಂಗ್ರೆಸ್‌ ಸರ್ಕಾರ ಆದೇಶಗಳನ್ನು ಹೊರಡಿಸುತ್ತಿದೆ. ಈ ಎಲ್ಲಾ ಯೋಜನೆಗಳು ಇನ್ನು ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಜಾರಿಗೆ ಬರಲಿವೆ.

ಆದ್ರೆ ಈ ಯೋಜನೆಗಳಿಂದ ಸರ್ಕಾರದ ಬೊಕ್ಕಸಕ್ಕೆ ಹಾನಿಯಾಗಲಿದೆ. ರಾಜ್ಯ ಸಾಲದ ಸುಳಿಯಲ್ಲಿ ಸಿಲುಕಲಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಇನ್ನು ಈ ಯೋಜನೆಗೆ ಅರವತ್ತರಿಂದ ಎಪ್ಪತ್ತು ಸಾವಿರ ಕೋಟಿ ರೂಪಾಯಿ ವರ್ಷಕ್ಕೆ ಬೇಕು. ಇಷ್ಟು ಹಣ ಎಲ್ಲಿಂದ ತರುತ್ತೀರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಆದ್ರೆ ಹಾಗೆ ನೋಡೋದಾದರೆ ಇಂತಹ ಭಾರಿ ಪ್ರಮಾಣದ ಉಚಿತ ಯೋಜನೆಗಳು ರಾಜ್ಯದಲ್ಲಿ ಘೋಷಣೆಯಾಗಿದ್ದು ಇದೇ ಮೊದಲ ಬಾರಿ. ಹಾಗಂತ ಯಾರೂ ಇಂತಹ ಯೋಜನೆಗಳನ್ನು ಮಾಡಿಲ್ಲ ಎಂದಲ್ಲ. ಪಕ್ಕದ ತಮಿಳುನಾಡು, ಆಂಧ್ರಪ್ರದೇಶ, ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಉಚಿತ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಈ ರಾಜ್ಯಗಳಲ್ಲಿ ಭಾರಿ ಪ್ರಮಾಣದ ಉಚಿತ ಯೋಜನೆಗಳನ್ನ ಜಾರಿಗೆ ತಂದರೂ ಆರ್ಥಿಕತೆ ಯಾವುದೇ ನಷ್ಟವಾಗಿಲ್ಲ. ಕೆಲವು ರಾಜ್ಯಗಳಲ್ಲಿ ಮಾತ್ರ ತೊಂದರೆಯೂ ಆಗಿದೆ. ಉದಾಹರಣೆಗೆ ನೋಡುವುದಾದರೆ, ಆಂಧ್ರ ಪ್ರದೇಶದಲ್ಲಿ ಜಗನ್‌ ಮೋಹನ್‌ ರೆಡ್ಡಿ ಸರ್ಕಾರ ಹಲವಾರು ಉಚಿತಗಳನ್ನು ನೀಡುತ್ತಿದೆ. ಸರ್ಕಾರದ ಬೊಕ್ಕಸದಲ್ಲಿ ಹಣವೆಲ್ಲಾ ಅದಕ್ಕೇ ಖರ್ಚಾಗುತ್ತಿದ್ದು, ಇತರೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ.

ಅದೇ ದೆಹಲಿಯಲ್ಲಿ ಕೇಜ್ರಿವಾಲ್‌ ನೇತೃತ್ವದ ಎಎಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಈಗ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಜಾರಿಗೆ ತರುತ್ತಿರುವ ಎಲ್ಲಾ ಯೋಜನೆಗಳನ್ನು ಎಂಟು ವರ್ಷಗಳ ಹಿಂದೆಯೇ ಜಾರಿ ಮಾಡಿತ್ತು. ಇತ್ತೀಚೆಗೆ ಉಚಿತ ವಿದ್ಯುತ್‌ ಯೋಜೆನಯನ್ನು ಆ ಸರ್ಕಾರ ವಾಪಸ್‌ ಪಡೆದಿದೆಯಾದರೂ, ಎಂಟು ವರ್ಷಗಳ ಕಾಲ ಭಾರಿ ಉಚಿತ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡಿತ್ತು. ಆದ್ರೆ ಆ ರಾಜ್ಯದ ಆರ್ಥಿಕತೆಗೆ ಯಾವುದೇ ನಷ್ಟವಾಗಿರಲಿಲ್ಲ.

ಉಚಿತ ಯೋಜನೆ ಜಾರಿ ಮಾಡಿದರೂ ಅದಕ್ಕೆ ಬೇಕಾದ ಸಂಪನ್ಮೂಲವನ್ನು ಸಂಗ್ರಹಿಸುವ ಶಕ್ತಿ ಇದ್ದರೆ ಯಾವುದೇ ತೊಂದರೆ ಇಲ್ಲದೆ ನಡೆಸಿಕೊಂಡು ಹೋಗಬಹುದು ಅನ್ನೋದಕ್ಕೆ ದೆಹಲಿ ಸರ್ಕಾರವೇ ಸಾಕ್ಷಿಯಾಗಿ ನಿಲ್ಲುತ್ತದೆ. ನಾವು ಸಂಪನ್ಮೂಲ ಕ್ರೂಢೀಕರಿಸದೇ ಬರೀ ಉಚಿತ ಕೊಡುಗೆಗಳನ್ನು ನೀಡಿದರೆ ಯಾವೆಲ್ಲಾ ತೊಂದರೆಯಾಗುತ್ತೆ ಅನ್ನೋದು ಆಂಧ್ರಪ್ರದೇಶ ಸರ್ಕಾರ ನಮಗೆ ಸಾಕ್ಷಿಯಾಗಿ ನಿಲ್ಲುತ್ತದೆ.

ಅಷ್ಟಕ್ಕೂ ಉಚಿತ ಕೊಡುಗೆಗಳು ಜನರನ್ನು ಸೋಮಾರಿಯನ್ನಾಗಿ ಮಾಡುತ್ತವಾ..?

ಉಚಿತ ಕೊಡುಗೆಗಳನ್ನು ನೀಡುವುದರಿಂದ ಆರ್ಥಿಕತೆಗೆ ಯಾವುದೇ ಲಾಭವಿಲ್ಲ. ಇದರಿಂದ ಜನರು ಸೋಮಾರಿಗಳಾಗುತ್ತಾರೆ ಎಂಬುದು ಕೆಲವರ ವಾದ. ಆದ್ರೆ, ಈಗಾಗಲೇ ಉಚಿತ ಕೊಡುಗೆಗಳನ್ನು ಪಡೆದ ರಾಜ್ಯಗಳಲ್ಲಿ ಜನರು ಸೋಮಾರಿಗಳಾಗಿದ್ದಾರೆ ಎಂಬುದಕ್ಕೆ ಯಾವುದೇ ಉದಾಹರಣೆಗಳು ಸಿಗೋದಿಲ್ಲ. ವಿದ್ಯುತ್‌, ಅಕ್ಕಿ, ಎರಡು ಸಾವಿರ ರೂಪಾಯಿ ಸಿಕ್ಕ ತಕ್ಷಣ ಜನರಿಗೆ ಬೇರೆ ಅಗತ್ಯಗಳೇ ಇರೋದಿಲ್ಲ ಎಂದು ಹೇಳೋದಕ್ಕೆ ಆಗೋದಿಲ್ಲ. ಜನರ ಅವಶ್ಯಕತೆಗಳು ತುಂಬಾನೇ ಇರುತ್ತವೆ. ಅವುಗಳನ್ನು ಪೂರೈಸಿಕೊಳ್ಳುವುದಕ್ಕೆ ಜನ ಕೆಲಸ ಮಾಡಲೇಬೇಕಾಗುತ್ತದೆ.

ಇನ್ನು ಬಡ ಜನರಿಗೆ ಬೆಳೆಯಬೇಕು. ಎತ್ತರಕ್ಕೇರಬೇಕು ಎಂಬ ಆಸೆ ಆಕಾಂಕ್ಷೆಗಳಿರುತ್ತವೆ. ಆದ್ರೆ ಅವರು ಮಾಡುವ ಕೆಲಸದಿಂದ ತಿನ್ನೋದಕ್ಕೆ ಅನ್ನವೂ ಸರಿಯಾಗಿ ಗಿಟ್ಟುತ್ತಿರುವುದಿಲ್ಲ. ಹೀಗಾಗಿ ಅವರೆಲ್ಲಾ ತಮ್ಮ ಕನಸುಗಳನ್ನು ಸಾಯಿಸಿಕೊಂಡು ಬದುಕುತ್ತಿರುತ್ತಾರೆ. ಸರ್ಕಾರಗಳು ಇಂತಹ ಕೊಡುಗೆಗಳನ್ನು ನೀಡುವುದರಿಂದ ಅವುಗಳನ್ನು ಬಳಸಿಕೊಂಡು ತಮ್ಮ ಆದಾಯವನ್ನು ವೃದ್ಧಿಸಿಕೊಳ್ಳಲು ಸಹಾಯಕವಾಗುತ್ತದೆ.

ಉಚಿತ ಕೊಡುಗೆಗಳಿಂದ ಸರ್ಕಾರಕ್ಕೇನು ಲಾಭ..?

ಇಂದಿರಾಗಾಂಧಿ ಕಾಲದಲ್ಲಿ ಉಳುವವನೇ ಭೂಮಿ ಒಡೆಯ ಎಂಬ ಕಾನೂನು ಜಾರಿಗೆ ತರಲಾಗಿತ್ತು. ಅದಕ್ಕೂ ಮೊದಲು ಪ್ರತಿ ಗ್ರಾಮದಲ್ಲೂ ಒಬ್ಬರೋ ಇಬ್ಬರಿಗೂ ನೂರಾರು ಎಕರೆ ಜಮೀನಿತ್ತು. ಅದರಲ್ಲಿ ಊರಿನಲ್ಲಿರುವ ಇತರರೆಲ್ಲಾ ಜೀತದಾಳುಗಳಂತೆ ಕೆಲಸ ಮಾಡುತ್ತಿದ್ದರು. ಆದ್ರೆ ಈ ಕಾನೂನು ಜಾರಿಯಾದ ಮೇಲೆ ಬಡವರಿಗೆಲ್ಲಾ ಭೂಮಿ ಸಿಕ್ಕಂತಾಯಿತು. ಭೂಮಿ ಸಿಕ್ತು ಅಂತ ಬಡವರು ಅದನ್ನು ಮಾರಿಕೊಂಡು ಸೋಮಾರಿಗಳಾಗಿ ಕೂರಲಿಲ್ಲ. ಬದಲಾಗಿ ತಮ್ಮ ಸ್ವಂತಕ್ಕೆ ಬಂದ ಭೂಮಿಯಲ್ಲಿ ಮತ್ತಷ್ಟು ಕಷ್ಟಪಟ್ಟು ದುಡಿದರು. ಇದರಿಂದ ದೇಶದಲ್ಲಿ ಆರ್ಥಿಕ ಅಸಮಾನತೆ ಸಾಕಷ್ಟು ಕಡಿಮೆಯಾಯಿತು. ಈ ಉಚಿತ ಕೊಡುಗೆಗಳೂ ಕೂಡಾ ಹೀಗೆಯೇ ಆರ್ಥಿಕ ಅಸಮಾನತೆ ತೊಡೆದು ಹಾಕಲು ಸಹಾಯಕವಾಗುತ್ತದೆ.

ಕೂಲಿ ಕೆಲಸ ಮಾಡುವವರಿಗೆ ದುಡಿಯವ ಹಣ ಮನೆ ನಿರ್ವಹಣೆಗೆ ಕೂಡಾ ಸಾಕಾಗುವುದಿಲ್ಲ. ಹೀಗಾಗಿ ಅವರು ತಮ್ಮ ಮಕ್ಕಳನ್ನು ಓದಿಸೋದಕ್ಕೆ ಹೋಗೋದಿಲ್ಲ. ಇದರಿಂದಾಗಿ ದೇಶದಲ್ಲಿ ಸಾಕ್ಷರತಾ ಪ್ರಮಾಣ ಕಡಿಮೆಯಾಗುತ್ತದೆ. ಇನ್ನು ಕೆಲ ಬಡ ಮಹಿಳೆಯರಿಗೆ ಆನಾದರೂ ಸ್ವಂತ ಉದ್ಯೋಗ  ಮಾಡುವ ಆಸೆ ಇರುತ್ತದೆ. ಆದ್ರೆ ಅದಕ್ಕೆ ಬಂಡವಾಳವಿಲ್ಲದೆ ತಮ್ಮ ಕನಸುಗಳನ್ನು ಸಾಯಿಸಿಕೊಳ್ಳುತ್ತಿರುತ್ತಾರೆ. ಅಂತಹವರಿಗೆ ಈ ಉಚಿತ ಕೊಡುಗೆಗಳು ಸಹಾಯಕವಾಗುತ್ತದೆ.

ಉಚಿತ ಅಕ್ಕಿ ನೀಡುವುದರಿಂದ ಮನೆಯ ನಿರ್ವಹಣೆಯ ಖರ್ಚು ಕಡಿಮೆಯಾಗುತ್ತದೆ. ಅದರಿಂದಾಗಿ ಕೊಂಚ ಹಣವನ್ನು ಉಳಿಸಬಹುದು. ಆ ಹಣದಿಂದ ಮಕ್ಕಳನ್ನು ಓದಿಸಬಹುದು. ಬೇರೆ ಯಾವುದಾದರೂ ಸ್ವ ಉದ್ಯೋಗಕ್ಕೆ ಬಂಡವಾಳವಾಗಿ ಆ ಹಣವನ್ನು ಬಳಸಿಕೊಳ್ಳಬಹುದು. ಇನ್ನು ಮನೆಯ ಯಜಮಾನಿಗೆ ಪ್ರತಿ ತಿಂಗಳೂ ಎರಡು ಸಾವಿರ ರೂಪಾಯಿ ಹಣ ಬಂದರೆ ಆಕೆ ಅದನ್ನು ಸಮರ್ಥವಾಗಿ ಬಳಸುತ್ತಾಳೆ. ಮಕ್ಕಳ ಯೋಗಕ್ಷೇಮಕ್ಕೆ ಖರ್ಚು ಮಾಡುತ್ತಾಳೆ. ಮಕ್ಕಳಿಗೆ ಒಳ್ಳೆಯ ಬಟ್ಟೆಯನ್ನು ಕಳುಹಿಸುತ್ತಾಳೆ. ಪುಸ್ತಕ ಮತ್ತಿತರ ಸಾಮಗ್ರಿಗಳನ್ನು ಕೊಡಿಸಲು ಸಹಾಯಕವಾಗುತ್ತದೆ.

ಬಡವರು ಹೀಗೆ ಉನ್ನತ ಕನಸು ಕಾಣಲು ಈ ಕೊಡುಗೆಗಳು ಸಹಾಯಕವಾಗುತ್ತವೆ. ಇನ್ನು ಸರ್ಕಾರ ಕೊಟ್ಟ ಹಣವನ್ನು ಬಡವರು ಉಳಿಸಿಕೊಂಡು ಒಂದೇ ಕೂಡಿಡುವುದಿಲ್ಲ. ಅವರ ಅಗತ್ಯಗಳಿಗೆ ಖರ್ಚು ಮಾಡುತ್ತಾರೆ. ಅಂದರೆ ಹಣ ದಿನವೂ ಚಲಾವಣೆಯಾಗುತ್ತದೆ. ಹಾಗೆ ಹಣ ಚಲಾವಣೆಯಾದರೆ ವ್ಯಾಪಾರ ವಹಿವಾಟುಗಳು ಇನ್ನಷ್ಟು ವೃದ್ಧಿಯಾಗುತ್ತವೆ. ವ್ಯಾಪಾರಗಳು ವೃದ್ಧಿಯಾದರೆ, ಉತ್ಪಾದನೆ ವಲಯಕ್ಕೂ ಚೈತನ್ಯ ಬರುತ್ತದೆ. ಹೀಗೆ ಆಗುವುದರಿಂದ ಸರ್ಕಾರ ಅದೇ ಹಣದಿಂದ ತೆರಿಗೆ ರೂಪದಲ್ಲಿ ಮತ್ತೆ ಹಣ ಬರುತ್ತದೆ.

ಇನ್ನು ಬರೀ ಅಭಿವೃದ್ಧಿ ಕೆಲಸಗಳೇ ಮಾಡೋದ್ರಿಂದ ಸಾಮಾನ್ಯ ಜನಕ್ಕೆ ಹೆಚ್ಚು ಉಪಯೋಗವಾಗೋದಿಲ್ಲ. ಹಾಗಂತ ಅಭಿವೃದ್ಧಿ ಕೆಲಸಗಳನ್ನು ಮಾಡಲೇಬಾರದು ಅಂತಲ್ಲ. ಅರ್ಥಿಕತೆ ಅಭಿವೃದ್ಧಿ ಕೆಲಸಗಳೂ ಮುಖ್ಯ. ಜೊತೆ ಇಂತಹ ಉಚಿತ ಕೊಡುಗೆಗಳೂ ಅವಶ್ಯಕ.

ಉಚಿತ ಕೊಡುಗೆಗಳಿಂದ ರಾಜ್ಯ ನಷ್ಟವಾಗುತ್ತಾ..?

ಈ ಉಚಿತ ಕೊಡುಗೆಗಳಿಂದ ರಾಜ್ಯದ ಬೊಕ್ಕಸಕ್ಕೆ ಕನಿಷ್ಠ ವರ್ಷಕ್ಕೆ ಐವತ್ತು ಸಾವಿರ ಕೋಟಿ ರೂಪಾಯಿ ನಷ್ಟವಾಗುತ್ತದೆ. ಅದನ್ನು ಸರ್ಕಾರ ಸರಿಯಾಗಿ ಸರಿದೂಗಿಸಬೇಕು ಅಷ್ಟೇ. ಅದನ್ನು ಮಾಡದಿದ್ದರೆ, ಅಭಿವೃದ್ಧಿ ಕೆಲಸಗಳಿಗೆ ಹಣವಿರೋದಿಲ್ಲ. ಅದು ಮತ್ತೊಂದು ಸಮಸ್ಯೆಗೆ ದಾರಿ ಮಾಡಿಕೊಡುತ್ತದೆ. ಹಣಕಾಸು ನಿರ್ವಹಣೆ ಸರಿಯಾಗಿ ಮಾಡಿದರೆ ಮಾತ್ರ ಈ ಉಚಿತ ಯೋಜೆನಗಳು ಜನರಿಗೆ ದಾರಿದೀಪವಾಗುತ್ತವೆ.

ಆಂಧ್ರ ಪ್ರದೇಶದ ಜಗನ್‌ ಸರ್ಕಾರ ಸರಿಯಾಗಿ ಅರ್ಥಿಕ ನಿರ್ವಹಣೆ ಮಾಡದ ಕಾರಣ, ಅಲ್ಲಿ ರಸ್ತೆ, ಚರಂಡಿ ಮುಂತಾದ ಕೆಲಸಗಳಿಗೆ ಹಣವೇ ಇಲ್ಲದಂತಾಗಿದೆ. ಕೊನೆಯದಾಗಿ ಹೇಳಬೇಕೆಂದರೆ ಸರ್ಕಾರಗಳು ಮಾಡುವ ದೊಡ್ಡ ದೊಡ್ಡ ಸಾವಿರಾರು ಕೋಟಿ ರೂಪಾಯಿ ಯೋಜನೆಗಳಿಂದಲೂ ಕೂಡಾ ಸರ್ಕಾರಕ್ಕೆ ನಷ್ಟವಾಗುತ್ತದೆ. ಇಂತಹ ಯೋಜನೆಗಳಲ್ಲಿ ಗುತ್ತಿಗೆದಾರರು ದೊಡ್ಡ ಮಟ್ಟದಲ್ಲಿ ಹಣ ಹೊಡೆಯುತ್ತಾರೆ. ಆ ಹಣ ಕಪ್ಪು ಹಣದ ರೂಪದಲ್ಲಿ ಅವರ ಮನೆಗಳಲ್ಲೇ ಉಳಿಯುತ್ತದೆ. ಅಪಾರ ಪ್ರಮಾಣದ ಕಪ್ಪು ಹಣ ಹಾಗೆ ಮನೆಗಳಲ್ಲಿ ಉಳಿದುಹೋಗಿರುವುದರಿಂದ ಸಾಮಾನ್ಯ ಜನರ ಕೈಗೆ ಹಣ ಸಿಗುತ್ತಿಲ್ಲ.

ಹೀಗಾಗಿ, ಜನರ ಕೈಗೆ ಹಣ ಸಿಗುವ ಇಂತಹ ಯೋಜನೆಗಳು ಬೇಕಾಗುತ್ತವೆ. ಆದ್ರೆ ಬರೀ ಅವುಗಳನ್ನೇ ನೀಡುವುದರ ಮೂಲಕ ತೆರಿಗೆ ಕಟ್ಟುವ ಜನರನ್ನು ನಿರ್ಲಕ್ಷ್ಯ ಮಾಡಬಾರದು ಅಷ್ಟೇ.

 

Share Post