ನಾಳೆಯೇ ಬಂದು ಮನೆ ಬಳಿ ಮಲಗಿಕೊಳ್ಳಲಿ; ಪ್ರತಾಪ ಸಿಂಹಗೆ ಡಿಕೆಶಿ ಟಾಂಗ್

ಬೆಂಗಳೂರು; ‌ಜೂನ್‌ ಒಂದರೊಳಗೆ ರಾಜ್ಯ ಸರ್ಕಾರ ಗ್ಯಾರೆಂಟಿ ಘೋಷಣೆಗಳನ್ನು ಜಾರಿ ಮಾಡದೇ ಹೋದರೆ ಜೂನ್‌ ೧ರಿಂದ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುವುದು ಎಂದು ಸಂಸದ ಪ್ರತಾಪ ಸಿಂಹ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು, ಅಷ್ಟು ದಿನ ಯಾಕೆ ಕಾಯ್ತೀರಿ. ನಾಳೆಯೇ ಬಂದು ನಮ್ಮ ಮನೆ ಹತ್ರ ಮಲಗಿಕೊಳ್ಳಿ ಎಂದು ವ್ಯಂಗ್ಯವಾಗಿ ಮಾತನಾಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿರುವ ಡಿ.ಕೆ.ಶಿವಕುಮಾರ್‌, ಕೊಟ್ಟ ಭರವಸೆಗಳನ್ನು ಈಡೇರಿಸುತ್ತೇನೆ ಎಂದು ಹೇಳಿದರು. ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದೇನೆ. ಮತ್ತೆ ದೆಹಲಿಗೆ ಹೋಗುತ್ತೇನೆ. ಕ್ಯಾಬಿನೆಟ್‌ ಚರ್ಚೆಗಾಗಿ ದೆಹಲಿಗೆ ಹೋಗುತ್ತಿದ್ದೇನೆ. ನಾಳೆ ಒಂದು ದಿನ ಎಲ್ಲವನ್ನೂ ತಿಳಿಸುತ್ತೇನೆ ಎಂದು ಡಿ.ಕೆ.ಶಿವಕುಮಾರ್‌ ಇದೇ ವೇಳೆ ಹೇಳಿದ್ದಾರೆ.

ಮತದಾರರು ಕಾಂಗ್ರೆಸ್‌ ಮುಖ ನೋಡಿ ಈ ಬಾರಿ ಮತ ಹಾಕಿಲ್ಲ. ಗ್ಯಾರೆಂಟಿ ಕಾರ್ಡ್‌ ನೋಡಿ ಮತ ಹಾಕಿದ್ದಾರೆ. ಹೀಗಾಗಿ ಕಾಂಗ್ರೆಸ್‌ ನಾಯಕರು ಕೊಟ್ಟಿರುವ ಭರವಸೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ಮಾಡುತ್ತೇವೆ ಎಂದು ನಿನ್ನೆ ಸಂಸದ ಪ್ರತಾಪ ಸಿಂಹ ಹೇಳಿದ್ದರು. ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆ ಮಾಡಿದ್ದಕ್ಕೆ ಉತ್ತರ ಕೊಟ್ಟ, ಡಿ.ಕೆ.ಶಿವಕುಮಾರ್‌, ಜೂನ್‌ ಯಾಕೆ ನಾಳೆಯೇ ನಮ್ಮ ಮನೆ ಬಳಿ ಬಂದು ಮಲಗಿಕೊಳ್ಳಲಿ ಎಂದು ಹೇಳಿದ್ದಾರೆ.

Share Post